ಸಾಮಾಜಿಕ ಮಾನವಶಾಸ್ತ್ರ
	ಸಾಂಸ್ಕøತಿಕ ಮಾನವಶಾಸ್ತ್ರದ ಒಂದು ಭಾಗ. ಇದು ಮೂಲನಿವಾಸಿಗಳ ಸರಳ ಸಮಾಜಗಳ ಸಾಮಾಜಿಕ ರಚನೆ, ಕುಟುಂಬ, ವಿವಾಹ, ಪ್ರಾಚೀನ ಪದ್ಧತಿಗಳು, ಆಸ್ತಿ, ಸರಕಾರ, ಕಾನೂನು, ನೈತಿಕ ಭಾವನೆ, ಧಾರ್ಮಿಕ, ಮಾಂತ್ರಿಕ ವಿದ್ಯೆ, ನಿಷೇಧ ಮತ್ತಿತರ ಸಾಮಾಜಿಕ ಚಟುವಟಿಕೆಗಳನ್ನು ಇತರ ಸಮಾಜಗಳೊಂದಿಗೆ ತುಲನಾತ್ಮಕವಾಗಿ ಅಧ್ಯಯನ ಮಾಡುತ್ತದೆ.

	ಮಾನವರನ್ನೂ ಅವರ ಜೀವನವನ್ನೂ ಕುರಿತು ಅಧ್ಯಯನ ಮಾಡುವ ಶಾಸ್ತ್ರಗಳು ಅನೇಕವಿವೆ. ಮಾನವರ ಮಾನಸಿಕ ವಿಚಾರಗಳನ್ನು ಅಧ್ಯಯನ ಮಾಡುವ ಶಾಸ್ತ್ರಕ್ಕೆ ಮನಶ್ಶಾಸ್ತ್ರವೆಂದೂ ವಿವಿಧ ಸಂಸ್ಥೆಗಳಲ್ಲಿ ಮಾನವರ ಸಾಮಾಜಿಕ ಸಂಬಂಧಗಳನ್ನು ಅಧ್ಯಯನ ಮಾಡುವ ಶಾಸ್ತ್ರಕ್ಕೆ ಸಮಾಜಶಾಸ್ತ್ರವೆಂದೂ ಮಾನವ ನಿರ್ಮಿತವಾದ ಸರಕಾರ, ಕಾನೂನು ಆಡಳಿತ, ಹಕ್ಕುಬಾಧ್ಯತೆ, ಚುನಾವಣೆ ಇತ್ಯಾದಿಗಳ ಬಗ್ಗೆ ತಿಳಿವಳಿಕೆ ಕೊಡುವ ಶಾಸ್ತ್ರಕ್ಕೆ ರಾಜ್ಯಶಾಸ್ತ್ರವೆಂದೂ ಮಾನವರ ಆರ್ಥಿಕ ಜೀವನಕ್ಕೆ ಸಂಬಂಧಪಟ್ಟ ವಿಷಯಗಳನ್ನು ವಿವೇಚಿಸುವ ಶಾಸ್ತ್ರಕ್ಕೆ ಅರ್ಥಶಾಸ್ತ್ರ ವೆಂದೂ ರಾಜ್ಯಗಳ ಉದಯ ಮತ್ತು ಅವನತಿಯ ಘಟನಾವಳಿಗಳನ್ನು ಅಧ್ಯಯನ ಮಾಡುವ ಶಾಸ್ತ್ರಕ್ಕೆ ಇತಿಹಾಸವೆಂದೂ ಕರೆಯುತ್ತೇವೆ. ಈ ಅಧ್ಯಯನಗಳು ಸಾಮಾಜಿಕ ಅಥವಾ ಸಾಂಸ್ಕøತಿಕ ಬೆಳವಣಿಗೆಯ ಅನಂತರ ಒಂದು ವ್ಯವಸ್ಥಿತವಾದ ರೂಪವನ್ನು ಪಡೆದುಕೊಂಡವು. ಇವು ಮಾನವನ ಒಂದೊಂದು ಕಾರ್ಯ ಚಟುವಟಿಕೆಯನ್ನೂ ಪ್ರತ್ಯೇಕವಾಗಿ ಅಧ್ಯಯನ ಮಾಡಿದರೆ ಸಾಮಾಜಿಕ ಮಾನವಶಾಸ್ತ್ರ ಒಟ್ಟಾರೆ ಮಾನವನ ಬದುಕನ್ನು ಅಧ್ಯಯನ ಮಾಡುತ್ತದೆ.

	ಮಾನವಶಾಸ್ತ್ರ ಅನ್ಯ ಸಂಸ್ಕøತಿಗಳ ಅಧ್ಯಯನಶಾಸ್ತ್ರವೆಂಬ ಅಭಿಪ್ರಾಯ ವಿದೆ. ಬಹುಶಃ ಇದಕ್ಕೆ ಮಾನವಶಾಸ್ತ್ರದ ವಿಕಾಸದ ಹಂತದಲ್ಲಿ ಸಂಭವಿಸಿದ ಘಟನೆಗಳೇ ಕಾರಣವೆಂದು ಹೇಳಬಹುದು. ಮಾನವ ವಿಜ್ಞಾನಿಗಳು ಆದಿವಾಸಿ ಸಮಾಜಗಳ ಅಧ್ಯಯನವನ್ನೇ ಮುಖ್ಯವಾಗಿಸಿ ಕೊಂಡರು. ಈ ಸಮಾಜಗಳೇ ಅವರ ಅಧ್ಯಯನ ಕ್ಷೇತ್ರಗಳಾದವು. 1930ರಿಂದ ಈಚೆಗೆ ಮಾನವಶಾಸ್ತ್ರದಲ್ಲಿ ಕ್ರಾಂತಿ ಸಂಭವಿಸಿತು. ಕ್ಷೇತ್ರಕಾರ್ಯ ವಿಧಾನ ಮಾನವಶಾಸ್ತ್ರೀಯ ಅಧ್ಯಯನಗಳಲ್ಲಿ ಅವಶ್ಯವೆಂದು ಕಂಡುಬಂದಿತು. ಇದಕ್ಕಿಂತ ಮೊದಲು ವಿಕಾಸವಾದದಿಂದ ಪ್ರಭಾವಿತವಾದ ವಿಧಾನಗಳನ್ನು ಈ ಅಧ್ಯಯನದಲ್ಲಿ ಬಳಸಲಾಗುತ್ತಿತ್ತು. ಆದ್ದರಿಂದಲೇ 19ನೆಯ ಶತಮಾನದ ಉತ್ತರಾರ್ಧದಲ್ಲಿ ಸಂಸ್ಕøತಿಯ ವಿವಿಧ ಮುಖಗಳನ್ನು ಅರಿಯಲು ಮಾನವಶಾಸ್ತ್ರಜ್ಞರು ವಿಕಾಸವಾದದಿಂದ ಪ್ರಭಾವಿತ ವಿಧಾನಗಳನ್ನು ಅನುಸರಿಸಿದ್ದನ್ನು ನೋಡಬಹುದು. ಉದಾಹರಣೆಗಾಗಿ, ಧರ್ಮ, ಕುಟುಂಬ, ಆರ್ಥಿಕ ವ್ಯವಸ್ಥೆ, ರಾಜ್ಯ ಮುಂತಾದವುಗಳನ್ನು ಅಭ್ಯಸಿಸುವಾಗ ಅವುಗಳ ಮೂಲ ಸ್ವರೂಪವೇನು? ಮತ್ತು ಅವು ಕಾಲಕ್ರಮೇಣ ಹೇಗೆ ವಿಕಾಸ ಹೊಂದಿವೆ? ಎಂಬುದನ್ನು ಕಂಡುಹಿಡಿಯುವ ಕುತೂಹಲ ಪ್ರಬಲವಾಗಿತ್ತು. ಕ್ಷೇತ್ರಾಧ್ಯಯನ ವಿಧಾನದಿಂದ ಇಂದು ಅನೇಕ ಸಾಮಾಜಿಕ ಸತ್ಯಗಳನ್ನು ಮಾನವ ಶಾಸ್ತ್ರಜ್ಞರು ಹೊರತೆಗೆದಿದ್ದಾರೆ.

	ಈ ಶಾಸ್ತ್ರವು ಒಂದು ನಿರ್ದಿಷ್ಟವಾದ ಸ್ಥಾನ ಪರಂಪರೆಯನ್ನು ಹೊಂದಿರಲು ಕ್ಷೇತ್ರಕಾರ್ಯ ವಿಧಾನದ ಆಗಮನ ಕಾರಣ ಎಂದು ನಿರ್ವಿವಾದವಾಗಿ ಹೇಳಬಹುದು. ಈ ಶಾಸ್ತ್ರವು ಬ್ರಿಟನ್ ದೇಶದಲ್ಲಿ ಅಭ್ಯುದಯಗೊಂಡು ಅನೇಕ ವಿದ್ವಾಂಸರು ಅದನ್ನು ತಮ್ಮ ಬರೆಹಗಳಿಂದ ಪುಷ್ಟಿಗೊಳಿಸಿದ್ದಾರೆ. ಮೂಲ ನಿವಾಸಿ ಸಮಾಜಗಳನ್ನು ಆಳವಾಗಿ ಅಭ್ಯಸಿಸಿ ಅವುಗಳ ಬಗ್ಗೆ ಮಹತ್ತ್ವಪೂರ್ಣ ವಿವರಗಳನ್ನು ಒದಗಿಸಲು ಮಾನವ ವಿಜ್ಞಾನಿಗಳು ನಿರಂತರವಾಗಿ ಶ್ರಮಿಸಿದ್ದಾರೆ. ಇ.ಬಿ.ಟೈಲರ್, ಜೇಮ್ಸ್ ಫ್ರೇಜರ್; ರ್ಯಾಡ್‍ಕ್ಲಿಫ್‍ಬ್ರೌನ್, ಮೆಲಿನೊಸ್ಕಿ, ರೇಮಾಂಡ್ ಪರ್ತ್ ಮೊದಲಾದವರ ಹೆಸರುಗಳು ಮುಖ್ಯವಾದುವು. ಇವರೆಲ್ಲರೂ ಕ್ಷೇತ್ರ ಕಾರ್ಯವಿಧಾನವನ್ನು ಬಳಸಿದವರು. ಮೂಲನಿವಾಸಿಗಳ ಸಾಂಸ್ಕøತಿಕ ಜೀವನವನ್ನು ಅಧ್ಯಯನ ಮಾಡಿ ಸಮಾಜದ ಮೂಲಸ್ವರೂಪ, ಸಮಾಜ ರಚನಾಕ್ರಮ, ಸಮಾಜದಲ್ಲಿರುವ ವ್ಯಕ್ತಿಗಳ ಸಂಬಂಧ ಮತ್ತು ಸಮಾಜ ವ್ಯವಸ್ಥೆ ಇವುಗಳನ್ನು ತಿಳಿದುಕೊಳ್ಳಲು ಇವರು ಪ್ರಯತ್ನಿಸಿದರು. ಜನಜೀವನದಲ್ಲಿ ಒಂದು ವ್ಯವಸ್ಥೆಯಿದೆ ಎಂಬುದನ್ನು ತಿಳಿದುಕೊಂಡರು. ಸಮಾಜ ವ್ಯವಸ್ಥೆಯನ್ನು ಕಾಪಾಡಿಕೊಂಡು ಬರುವಲ್ಲಿ ಸಂಘ ಸಂಸ್ಥೆಗಳು ಹೇಗೆ ಕಾರ್ಯ ನಿರತವಾಗಿರುತ್ತವೆಯೆಂಬುದನ್ನು ತಿಳಿಯುವ ಪ್ರಯತ್ನ ಮಾಡಿದರು.

	ಈ ಶಾಸ್ತ್ರ ಪ್ರಧಾನವಾಗಿ ಪ್ರಾಚೀನ ಜೀವನ ಹೇಗೆ ವ್ಯವಸ್ಥೆ ಗೊಂಡಿತ್ತು, ಆದಿಯಲ್ಲಿ ಮಾನವನ ಲೈಂಗಿಕ ಜೀವನ ಹೇಗಿತ್ತು, ಕುಟುಂಬ ಮತ್ತು ವಿವಾಹಗಳು ಆದಿಯಿಂದಲೂ ಇದ್ದುವೆ, ಅವರ ವಿವಾಹ ಪದ್ಧತಿಗಳು ಹೇಗಿದ್ದವು, ವಧುವನ್ನು ಹುಡುಕುವ ವಿಧಾನಗಳೇನು, ಕುಟುಂಬದ ಯಜಮಾನಿಕೆ ಪಿತೃವಿಗೆ ಸೇರಿತ್ತೆ ಇಲ್ಲವೆ, ಮಾತೃವಿಗೆ ಸೇರಿತ್ತೆ, ಆದಿಕಾಲದ ಮತಧರ್ಮಗಳೇನು, ತಂದೆ-ತಾಯಿ-ಮಕ್ಕಳು ಪತಿ-ಪತ್ನಿಯರ ಸಂಬಂಧಗಳು ಯಾವ ತೆರನಾಗಿದ್ದುವು, ಬಂಧುತ್ವದ ರಚನೆ ಹೇಗಿದ್ದಿತು, ಇವೇ ಮುಂತಾದ ವಿಚಾರಗಳನ್ನು ತಿಳಿಸುವುದಲ್ಲದೆ ಕಾಲಕಾಲಕ್ಕೆ ಅವುಗಳಲ್ಲಿ ಆದ ಬದಲಾವಣೆಗಳನ್ನು ತಿಳಿಸಲು ಪ್ರಯತ್ನಿಸು ತ್ತದೆ. ಸಾಮಾಜಿಕ ಮಾನವ ಶಾಸ್ತ್ರವನ್ನು ಚೆನ್ನಾಗಿ ತಿಳಿಯಬೇಕಾದರೆ ಪ್ರಾಕ್ತನಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಮನಶ್ಶಾಸ್ತ್ರ ಮುಂತಾದ ಮಾನವ ಜೀವನವನ್ನು ವರ್ಣಿಸುವ ಎಲ್ಲ ಸಾಮಾಜಿಕಶಾಸ್ತ್ರಗಳ ಸಾಧಾರಣ ಅನುಭವ ಇರಲೇಬೇಕು. ಮಾನವಶಾಸ್ತ್ರ ಮಾನವ ಜೀವನದ ಎಲ್ಲ ಕ್ಷೇತ್ರಗಳ, ಎಲ್ಲ ರೀತಿಯ ಚಟುವಟಿಕೆಗಳ ವಿಷಯಗಳನ್ನು ಒಳಗೊಂಡಿರುವುದರಿಂದ ಅದಕ್ಕೆ ಹಲವು ಶಾಸ್ತ್ರಗಳ ಜ್ಞಾನ ಅನಿವಾರ್ಯವಾಗಿದೆ.

	ಈ ಶಾಸ್ತ್ರ ಸಮಾಜ ರಚನೆಯನ್ನು ಅಧ್ಯಯನ ಮಾಡುವುದಲ್ಲದೆ, ಸಮಾಜದಲ್ಲಿ ಹೇಗೆ ಬದಲಾವಣೆಗಳು ಸಂಭವಿಸುತ್ತವೆ, ಅವುಗಳಿಂದ ಸಮಸ್ಯೆಗಳು ಹೇಗೆ ತಲೆದೋರುತ್ತವೆ ಎಂಬುದನ್ನೂ ಅಧ್ಯಯನ ಮಾಡುತ್ತದೆ. 19ನೆಯ ಶತಮಾನದಲ್ಲಿ ಯುರೋಪಿನ ಔದ್ಯೋಗಿಕ ಕ್ರಾಂತಿಯ ತರುವಾಯ ಸಾಮಾಜಿಕ ಮತ್ತು ಆರ್ಥಿಕ ಜೀವನ ರಂಗದಲ್ಲಿ ಭಾರಿ ಬದಲಾವಣೆಗಳು ಸಂಭವಿಸಿದವು. ಯುರೋಪಿನ ಆರ್ಥಿಕ ಕ್ರಾಂತಿ ಅಲ್ಲಿನ ಉತ್ಪಾದನಾಶಕ್ತಿಯನ್ನು ಹೆಚ್ಚಿಸಿತು. ಅಲ್ಲಿನ ಸರಕುಗಳನ್ನು ಪರದೇಶಗಳಲ್ಲಿ ಮಾರಾಟ ಮಾಡುವುದು ಅವಶ್ಯವಾಯಿತು. ಇದಕ್ಕಾಗಿ ಅವರು ಪ್ರಪಂಚದ ವಿವಿಧ ಭಾಗಗಳಲ್ಲಿ ತಮ್ಮ ಉಪನಿವೇಶನಗಳ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಿದರು. ಸೈನ್ಯ ಬಲದಿಂದಲೂ ರಾಜಕೀಯ ಚಾಣಾಕ್ಷತನದಿಂದಲೂ ಅಲ್ಲಿಯ ಜನರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಉಪನಿವೇಶನಗಳಿಂದ ಕಚ್ಚಾಸಾಮಗ್ರಿಗಳನ್ನು ರಫ್ತು ಮಾಡಿ ತಮ್ಮ ದೇಶದಲ್ಲಿ ತಯಾರಿಸಲ್ಪಟ್ಟ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಕ್ರಿಶ್ಚಿಯನ್ ಪಾದ್ರಿಗಳೂ ಧರ್ಮ ಪ್ರಚಾರದ ನೆಪದಲ್ಲಿ ಸ್ಥಳೀಯ ಜನರನ್ನು ಮತಾಂತರಗೊಳಿಸುವ ಉದ್ದೇಶವುಳ್ಳ ವರಾಗಿದ್ದರು. ಅವರ ಸಾಂಸ್ಕøತಿಕ ಜೀವನದಲ್ಲಿ ಧರ್ಮದ ನೆಪದಿಂದ ಬದಲಾವಣೆಗಳನ್ನು ತರಲು ಪ್ರಯತ್ನಿಸಿದರು. ಹೀಗಾಗಿ ಸ್ಥಳೀಯ ಜನಜೀವನದ ಎಲ್ಲ ವಿಷಯಗಳಲ್ಲಿ ಬದಲಾವಣೆಗಳು ಸಂಭವಿಸಿದ್ದರಿಂದ ಅವರ ಜೀವನವನ್ನು ಅಭ್ಯಾಸ ಮಾಡುವ ಪ್ರಸಂಗ ಸಾಮಾಜಿಕ ಮಾನವಶಾಸ್ತ್ರಜ್ಞರ ಪ್ರಮುಖ ಕಾರ್ಯವಾದುದರ ಫಲವಾಗಿ, ತರಬೇತಾದ ಸಾಮಾಜಿಕ ಮಾನವಶಾಸ್ತ್ರಜ್ಞರನ್ನು ಆಯಾಯಾ ಸ್ಥಳಗಳಿಗೆ ನೇಮಿಸಲಾಗು ತ್ತಿತ್ತು. ಹೀಗೆ ಸ್ಥಾಪಿತವಾದ ಕಂಪನಿ ಸರ್ಕಾರಗಳ ಅಧಿಕಾರಿಗಳು ಸ್ಥಳೀಯ ಮೂಲನಿವಾಸಿಗಳ ಜನಜೀನವದಲ್ಲಿ ಕಂಡುಬಂದ ಬದಲಾವಣೆ ಗಳನ್ನು ಅಭ್ಯಸಿಸಲು ಪ್ರಾರಂಭಿಸಿದರು.

	ಸಾಮಾಜಿಕ ಮಾನವಶಾಸ್ತ್ರವು ಮಾನವ ಸಮಾಜದ ರಚನೆ, ಪ್ರತಿಕ್ರಿಯೆ ಮತ್ತು ವ್ಯವಸ್ಥೆಗಳ ಬಗ್ಗೆ ಸಿದ್ಧಾಂತಗಳನ್ನು ನಿರೂಪಿಸಿದೆ. ಇವುಗಳ ಸಹಾಯದಿಂದ ಸಾಮಾಜಿಕ ಸನ್ನಿವೇಶಗಳನ್ನು ಅಧ್ಯಯನ ಮಾಡಬಹುದು. ಇಂದು ಈ ಶಾಸ್ತ್ರ ಗ್ರಾಮ ಮತ್ತು ನಗರಗಳಲ್ಲಿ ವಾಸಿಸುವಂತಹ ಜನಸಮೂಹಗಳ ಸಾಮಾಜಿಕ ಜೀವನವನ್ನು ತನ್ನ ಅಧ್ಯಯನದ ಪರಿಧಿಗೆ ಸೇರಿಸಿಕೊಂಡಿದೆ. ಸಂಕೀರ್ಣ ಸಮಾಜದ ಘಟಕದಂತಿರುವ ಗ್ರಾಮೀಣ ಸಮಾಜಗಳ ವ್ಯವಸ್ಥಾಕ್ರಮವನ್ನು ಅಭ್ಯಸಿಸುತ್ತದೆ. ಸಾಮಾಜಿಕ ಬದಲಾವಣೆ ಗಳು ಸಮಾಜದ ವ್ಯಕ್ತಿಗಳಲ್ಲಿ ಪರಸ್ಪರ ಸಂಬಂಧಗಳಲ್ಲಿ ಬದಲಾವಣೆಗ ಳನ್ನು ತರುವುವು, ಇವುಗಳಿಂದ, ಸಾಮಾಜಿಕ ಹೊಂದಾಣಿಕೆಯ ಸಮಸ್ಯೆ ಉದ್ಭವಿಸುವುದು. ಇಂಥ ಅನೇಕ ಸನ್ನಿವೇಶಗಳ ಅಧ್ಯಯನವು ಸಾಮಾಜಿಕ ಮಾನವ ಶಾಸ್ತ್ರದ ವ್ಯಾಪ್ತಿಯಲ್ಲಿ ಸೇರಿದೆ.

	ಈ ಶಾಸ್ತ್ರವನ್ನು ತುಲನಾತ್ಮಕ ಸಮಾಜಶಾಸ್ತ್ರವೆಂದು ಇವಾನ್ಸ್ ಪ್ರಿಚರ್ಡ್ ಅಭಿಪ್ರಾಯಪಟ್ಟಿದ್ದಾನೆ. ಇತ್ತೀಚಿನ ದಿನಗಳಲ್ಲಿ ತಾವು ವಾಸಿಸುತ್ತಿರುವ ಸಮಾಜಗಳ ಅಧ್ಯಯನದ ಕಡೆಗೂ ಮಾನವಶಾಸ್ತ್ರಜ್ಞರು ಗಮನ ಹರಿಸುತ್ತಿದ್ದಾರೆ. ಮಾನವಶಾಸ್ತ್ರದಲ್ಲಿ ಬಳಸಲಾಗುವ ಅಧ್ಯಯನ ವಿಧಾನಗಳನ್ನೇ ಬಳಸಿ ಆಧುನಿಕ ಅಥವಾ ಕೈಗಾರಿಕಾ ಸಮಾಜಗಳನ್ನು ಕುರಿತ ಸಂಶೋಧನೆಗಳನ್ನು ಸಾಮಾಜಿಕ ಮಾನವಶಾಸ್ತ್ರಜ್ಞರು ಹೆಚ್ಚು ಹೆಚ್ಚಾಗಿ ಕೈಗೊಳ್ಳುತ್ತಿರುವುದರಿಂದ, ಸಮಾಜಶಾಸ್ತ್ರ ಮತ್ತು ಸಾಮಾಜಿಕ ಮಾನವಶಾಸ್ತ್ರಗಳ ನಡುವಣ ಅಂತರ ಮತ್ತಷ್ಟು ಕಡಿಮೆಯಾಗುತ್ತಿದೆ.									
	(ಪಿ.ಎನ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ